Friday, October 14, 2011

ಮೌನಯಾನದಿ ನಾವು

                         

  ಕನ್ನಡ ಪ್ರಭದಲ್ಲಿ ಬಹುಮಾನ ಪಡೆದ ಲೇಖನ . (ದಿನಾಂಕ : ಮೇ ೮ )
                             ಚಂದ್ರ ಕಾಣುತ್ತಿದ್ದ ಆ ಹೊತ್ತು ಮನಸ್ಸು ನಿನ್ನೊಡನೆ ಇರಲು ಬಯಸಿತ್ತು. ದುಂಡು ಮುಖ ಹೊತ್ತು ಹಾಲಿನಂತೆ ಕಂಗೊಳಿಸುತ್ತಿದ್ದ ಅವನು ನಾವು ಹೆಜ್ಜೆ ಮುಂದಿಟ್ಟಾಗಲೆಲ್ಲ ನಮ್ಮೊಂದಿಗೆ ಬರುತ್ತಿದ್ದ. ಕಾಲ ಕ್ರಮಿಸುತಿತ್ತು ಅದು ಮೀರುವ ಮೊದಲೇ ಮಾತನಾಡಿಬಿಡುವ ತವಕ ಆದರೆ...ಮಾತೇ ಹುಟ್ಟುತ್ತಿಲ್ಲ, ಮೌನ ಮುರಿಯಲು ಇಬ್ಬರಿಂದಲೂ ಆಗುತ್ತಿಲ್ಲ. ನೀ ನಡೆದಂತೆ ನಾನು ನಡೆಯುತ್ತಿದ್ದೆ ಜೊತೆಯಲ್ಲಿ.ಸಣ್ಣಗೆ ಬೀಸಿದ ಗಾಳಿ ದಾರಿ ತುಂಬಾ ಹರಡಿದ್ದ ಒಣ ಎಲೆಗಳನ್ನು ಅಲುಗಾಡಿಸುತ್ತಿತ್ತು, ನಾನು ನೆನಪುಗಳ ಲೋಕಕ್ಕೆ ಜಾರಿದ್ದೆ. ತಂಪಾಗಿ ಬೀಸುತ್ತಿದ್ದ ಗಾಳಿ ಒಮ್ಮೆಲೇ ಕೊಂಚ ಜೋರಾಗಿ ಸ್ಪಶರ್ಿಸಿದರೆ ಸಾಕು ನನ್ನ ನೆನಪಾಗಿರಬೇಕು ನಿನಗೆ ಎಂದು ಭಾವಿಸುತ್ತಿದ್ದ ಆ ದಿನಗಳ ಮೆಲುಕು ಸುಂಯ್ ಎಂದು ಹಾದು ಹೋಗಿತ್ತು.
                               ಕಾಲೇಜು ದಿನಗಳ ನೆನಪಾಗಿತ್ತು, ಗಲ್ಲದ ಮೇಲೆ ಕೈಯೊಡ್ಡಿ ಪಾಠ ಕೇಳುವಂತೆ ನಟಿಸಿ ನಿನ್ನನ್ನೆ ನೋಡುವುದರಲ್ಲಿ ಅದೇನೋ ಆಸಕ್ತಿ ನನಗೆ, ಎಷ್ಟು ನೋಡಿದರೂ ಸಾಲದು ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಪಕ್ಕದ ಗೆಳತಿಗೆ ಸಂದೇಹ ಬರಬಹುದೆಂಬುದನ್ನೂ ಮರೆತು ನಿನ್ನನ್ನೆ ನೋಡುತ್ತಿದ್ದೆ. ನನ್ನ ದಿಟ್ಟ ನೋಟಕ್ಕೆ ನೀನೊಮ್ಮೆ ತಿರುಗಿ ನೋಡಿದರೆ ಸಾಕು ಸಣ್ಣ ನಗೆಯೊಂದು ಕೆನ್ನೆಯಲ್ಲಿ ಗುಳಿ ತಂದು ಗಲ್ಲದ ಮೇಲಿನ ಕೈಯನ್ನು ಸಡಲಿಸಿಬಿಡುತ್ತಿತ್ತು. ನಿನ್ನ ಮೇಲೆ ಸಾಕಷ್ಟು ಮೋಹ ಬೆಳೆಸಿಕೊಂಡಿದ್ದೆ. ಗೆಳತಿಯರೆಲ್ಲ ನಿನ್ನ ವಿಚಾರ ಮಾತನಾಡುತ್ತಿದ್ದರೆ ಮತ್ಸರದಿಂದ ಹಲ್ಲು ಕಡಿಯುತ್ತಿದ್ದೆ. ಎಷ್ಟೋ ಬಾರಿ ನನಗನ್ನಿಸಿದ್ದನ್ನು ಹೇಳಲು ನಾಚಿಕೆಯಾಗಿ ಭಯವಾಗಿ ಹೇಳದೆ ಹೋಗುತ್ತಿದ್ದೆ. ಅವನ್ನೆಲ್ಲಾ ನಿವಾಳಿಸಿ ನಿನ್ನೆದುರಿಗೆ ಧೈರ್ಯವಾಗಿ ಪ್ರೀತಿಯ ಮಾತುಗಳನ್ನಾಡಿಬಿಡುವ ಎನ್ನುವಷ್ಟರಲ್ಲಿ ಹಿಂಜರಿಕೆಯೊಂದು ನನ್ನ ತಡೆದು ಬಿಡುತ್ತಿತ್ತು. ನೀ ಎದುರಿಗೆ ಬಂದಾಗ ಎಲ್ಲವೂ ಮರೆತು ಹೋಗಿ ನಗುವುದೊಂದನ್ನು ಬಿಟ್ಟು ಬೇರೇನು ಮಾಡುತ್ತಿರಲಿಲ್ಲ. ಬೆಳಗುತ್ತಿದ್ದ ದಾರಿ ದೀಪಗಳು ಒಮ್ಮೆಲೆ ಮಂದವಾಗಿ ಹೋಗಲು ನಾನು ನೆನಪುಗಳಿಂದಾಚೆಗೆ ಬಂದಿದ್ದೆ.
 ಹೆಜ್ಜೆ ಚಿಕ್ಕ ಚಿಕ್ಕ ಹುಲ್ಲು ರಾಶಿಗಳ ಮೇಲೆ ಸಾಗಿತ್ತು, ಮನಸಿನ ತುಂಬಾ ತಂಗಾಳಿ ತಂದ ನೀನು ಮಾತ್ರ ಇನ್ನೂ ಮೌನ ಮುರಿದಿಲ್ಲ, ನಿನ್ನ ಕಡುಮೌನದಲ್ಲಿ ನಾನು ಕಳೆದು ಹೋಗುತ್ತಿದ್ದೆ. ರಸ್ತೆ ಬದಿಯ ಮರಗಳು, ದೀಪದ ಕಂಬಗಳು, ಬಸ್ ಸ್ಟ್ಯಾಂಡ್, ಚಲಿಸುವ ವಾಹನಗಳು ಎಲ್ಲವೂ ಮಾಮೂಲಿನಂತೆ ಕಾಣುತ್ತಿತ್ತಾದರೂ ನಿನ್ನ ಸನಿಹ ಮನಸಿಗೆ ಮುದ ನೀಡುತ್ತಿತ್ತು. ಕಣ್ಣು ಎಲ್ಲ ಬದಿಯೂ ಪ್ರದಕ್ಷಿಣೆ ಹಾಕುತ್ತಿತ್ತು. ಒಮ್ಮೆ ಹಾಯಿಸಿದಷ್ಟು ದೂ.........ರಕ್ಕೆ ನೇರ ನೋಡಿ ಕೆಳಗೆ ಬಾಗುತ್ತಿದ್ದ ದೃಷ್ಠಿ ಮತ್ತೆ ಮೇಲೆ ನೋಡುತಿತ್ತು. ಎಣಿಸಲಾಗದಷ್ಟು ತಾರೆಗಳ ಚಿತ್ತಾರ ಬಿಡಿಸಿದ ಆಗಸವನ್ನೊಮ್ಮೆ ನೋಡಿ ಮನದಂಗಳದಲ್ಲಿ ನೀ ಚೆಲ್ಲಿದ್ದ ಎಣಿಕೆಗೆ ಸಿಗದ ನೆನಪುಗಳ ನೆನೆದು ಬೀಗುತಿದ್ದೆ. ಇನ್ನೂ ನೀನು ಮಾತಾಡುತ್ತಿಲ್ಲ.
                                  ನಿನ್ನ ಹೊರತಾದ ನೆನಪುಗಳಲ್ಲಿ ನಾನಿಲ್ಲ, ನಿನ್ನ ಹೊರತಾದ ಭಾವಗಳಲ್ಲಿ ನಾನಿಲ್ಲ, ನಿನ್ನ ಹೊರತು ಬೇರೇನು ಬೇಕಿಲ್ಲ ಹೀಗೆಲ್ಲ ಅನಿಸುವುದೇಕೊ ತಿಳಿಯುತ್ತಿಲ್ಲ. ಮನಸೊಳಗೆ ತುಂಬಿ ಹೋಗಿರುವ ಮಾತುಗಳನ್ನೆಲ್ಲಾ ಹೊರ ಹಾಕಲು ಧೈರ್ಯ ಸಾಲುತ್ತಿಲ್ಲ, ಬಹುಶಃ ನಿನಗೂ ಹೀಗೆ ಆಗುತ್ತಿರಬಹುದು. ಅದಕ್ಕೆ ಮಾತುಗಳನ್ನು ನುಂಗಿದ್ದೀಯ ದಾರಿ ಸವೆಯುವ ಮುಂಚೆ ನೀನು ಹೇಳಬೇಕಿರುವುದನ್ನು ಹೇಳುವುದು ಇನ್ನೂ ಸಂಶಯವಾಗಿದೆ. ಅದೇಕೆ ಇಂದು ಇಷ್ಟು ಮೌನವಾಗಿದ್ದೀಯ? ನಿನ್ನ ನೆನಪುಗಳಿಂದ ದೂರ ಉಳಿಯದ ನಾನು, ಮನಸಿನ ಪುಟದಲ್ಲಿ ನಿನ್ನ ಛಾಯೆ ಕಂಡಂತೆಲ್ಲಾ ಮಾತು ಮರೆತು ಮೌನಿಯಾಗುತ್ತೇನಲ್ಲ ಹಾಗೆ ನಿನ್ನ ಮೌನಕ್ಕೂ ಕಾರಣ ಇರಬಹುದಾ, ಆ ಕಾರಣ ನಾನಾಗಿರಬಹುದಾ? ಇಂಥ ಸುಂದರ ಬೆಳದಿಂಗಳಲ್ಲಿ ನನ್ನ ಕೈ ಹಿಡಿದು ನಡೆಯದೆ ಉದ್ದ ಮಲಗಿರುವ ಖಾಲಿ ರಸ್ತೆಯಲ್ಲಿ ಸುಮ್ಮನೆ ಹೋಗುತ್ತಿರುವೆಯಲ್ಲ ನಿನ್ನ ಮುಚ್ಚಿಟ್ಟ ಪ್ರೀತಿ, ಬಚ್ಚಿಟ್ಟ ಪ್ರೀತಿಯನ್ನೊಮ್ಮೆ ಅಭಿವ್ಯಕ್ತಗೊಳಿಸಬಾರದೆ? ಸುಮ್ಮನೆ ಹೀಗೆ ನಡೆಯುತ್ತಿದ್ದರೆ ಆಲೋಚನೆಗಳು ದಿಕ್ಕು ದಿಕ್ಕುಗಳಲ್ಲಿ ಹರಿದಾಡುತ್ತವೆ. ಮಾತನಾಡಬಾರದೇ ನೀನು.
                              ಇನ್ನು ನನ್ನಿಂದಾಗುವುದಿಲ್ಲ ನಾನೆ ಮಾತಾನಾಡಬೇಕೆಂದು ನಿರ್ಧರಿಸಿ ನಿನ್ನ ಕಡೆ ತಿರುಗಿ ನೋಡಿದೆ, ನಾ ಒಪ್ಪಿದರೆ ಜೀವನ ಪೂರಾ ಮೌನವನ್ನೇ ಉಡುಗೊರೆಯಾಗಿ ಕೊಟ್ಟು ಬಿಡುವಂತಿತ್ತು ನಿನ್ನ ನೋಟ ಮತ್ತೆ ಸುಮ್ಮನಾದೆ. ಪಾಕರ್ಿನ ಕಲ್ಲು ಬೆಂಚಿನ ಮೇಲೆ ಕೂತ ನೀನು ನನ್ನನ್ನು ಕೂರಲು ಸನ್ನೆ ಮಾಡಿದಾಗಲೆ ಮನಸ್ಸು ಹಗುರವಾಯಿತು.  ನಿನ್ನ ಮೌನ ಅರ್ಥವಾಗಲಿಲ್ಲ. ಆ ಕೈಯನ್ನೆಳೆದು ಕೇಳಿಯೇ ಬಿಟ್ಟೆ ನಿನ್ನ ಮಾತುಗಳಿಗಾಗೆ ಕಾಯುತ್ತಿದ್ದೇನೆ ಏಕೆ ಸುಮ್ಮಿನಿದ್ದು ಸತಾಯಿಸುತ್ತೀಯ ನಾ ಬಯಸಿದ ಮಾತುಗಳು ನಿನ್ನಲ್ಲಿವೆ ಆ ಕಂಗಳೇ ಹೇಳುತ್ತಿರುವಂತೆ ಪ್ರೀತಿಯ ಮಾತಗಳನ್ನೊಮ್ಮೆ ಹೊರಗೆಡವಬಾರದೆ ಎಂದೆ. ಆ ಕ್ಷಣ ನನ್ನನ್ನೆ ದಿಟ್ಟಿಸಿ ನೀನಿದ್ದ ನೆನ್ನೆಗಳಲ್ಲಿರುವ ನಾನು, ನೀನಿರದ ನಾಳೆಗಳಲ್ಲಿ ಬದುಕಲಾರೆ, ನಿನ್ನನ್ನು ಸಂಪೂರ್ಣ ಹತ್ತಿರವಾಗಿಸಿಕೊಂಡಿದೆ ಮನಸು ಎಲ್ಲವನ್ನೂ ಮುಖಕ್ಕೆ ಹಿಡಿದು ತೋರುವ ಕನ್ನಡಿಯಾಗಲಾರೆ ಮನಸ್ಸಿಗೊಂದಿಷ್ಟು ಮಿಡಿತವಿದ್ದರೆ ಮೀಟಿ ಎಂದು ಪೊಟ್ಟಣ ಬಿಚ್ಚಿ ಕೆಂಪು ಗುಲಾಬಿ ಹಿಡಿದು ನಿನ್ನ ಬಾಳಿಗೆ ಆಹ್ವಾನವಿತ್ತ ನೀನು, ಬಹಳ ಸಮಯದಿಂದ ಮನಸ್ಸಿನಲ್ಲಿ ನಾನಿತ್ತ ಬೇಡಿಕೆಗೆ ಉತ್ತರವಾಗಿ ಕಂಡಿದ್ದೆ. ಮೌನ ಮುರಿದು ನನ್ನ ಜನುಮ ದಿನಕ್ಕೆ ಉಡುಗೊರೆಯಾಗಿ ನಿಂತಿದ್ದ ನಿನ್ನನ್ನು ಬಿಗಿದಪ್ಪಿ ಅತ್ತಿದ್ದ ಆ ಸಂತಸಕ್ಕೆ ಪಾರವುಂಟೆ?
 


ಮನಸಿನ ಮಾತು


ಮನಸಿನ ಮಾತು:

                           ನಿಜ ಹೇಳುವ ಮನಸು, ನಿಜ ಹೇಳಲಾಗದ ಮನಸು, ನಿಜ ಹೇಳುವುದಾದರೆ ನಿನ್ನ ಮನಸು ಎಂದೋ ನನ್ನನ್ನ ಆವರಿಸಿಬಿಟ್ಟಿದೆ. ನನ್ನ ಭಾವನೆಗಳು, ಇದುವರೆಗೂ ಕಾದು ಉಳಿಸಿಕೊಂಡ ವಿಷಯವೊಂದನ್ನು ಹೇಳಲಾಗದೆ, ಮುಚ್ಚಿಡಲೂ ಆಗದೆ ವ್ಯಥೆ ಪಡುತ್ತಿದ್ದೇನೆ.
                                ನಿನ್ನ ಮನಸು ಮಗುವಿನ ನಗು, ಬೇರೆಯವರ ನೋವಿಗೆ ಸ್ಪಂದಿಸುವ ರೀತಿ, ಅದೆಲ್ಲದರ ಹಿಂದೆ ಅಡಗಿರುವ ನಿನ್ನ ನೋವು ಎಲ್ಲವನ್ನೂ ತಿಳಿದಿರುವ ನಾನು ಸದಾ ನಿನ್ನೋಡನೆಯೆ ಇರುವ ನಿರೀಕ್ಷೆಯಲ್ಲಿದ್ದೇನೆ. ನಿನ್ನನ್ನು ಅತಿಯಾಗಿ ಹತ್ತಿರವಾಗಿಸಿಕೊಂಡಿದೆ ಮನಸ್ಸು. ನಾ ಹತ್ತಿರವಾಗುತ್ತಿದ್ದೇನೆಂದು ತಿಳಿದರೆ ಎಲ್ಲಿ ದೂರ ಆಗುವೆಯೋ ಎಂಬ ಭಯ, ಬೇಡ ನಿನ್ನೊಡನೆ ಹೀಗೆ ಮೊದಲಿನಂತೆ ಇದ್ದು ಬಿಡುವೆ ನಿನ್ನ ತಿರಸ್ಕಾರವನ್ನು ಮನಸ್ಸು ಸಹಿಸುವುದಿಲ್ಲ.
                                             ಮನಸಿನ ಮಾತಿಗೆ ಕಟ್ಟು ಬಿದ್ದು ಹೇಳಿಬಿಟ್ಟರೆ ಆ ದಿಗಂತದಾಚೆಗೊಂದು ಕೈ ಚಾಚಿದಂತಾಗುವುದೇನೋ ಎಂಬ ಆತಂಕ. ಮಾತು ಮೌನಗಳ ದ್ವಂದ್ವಕ್ಕೆ ಸಿಲುಕಿದ್ದೇನೆ. ನಿನ್ನ ನೆನಪುಗಳ ಛಾಯೆ ಮೂಡಿದಂತೆಲ್ಲಾ ನಿನ್ನನ್ನು ಮರೆಯುವುದು ಅಸಾಧ್ಯ ಎಂದನಿಸುತ್ತದೆ.ನಿನ್ನನ್ನು ಪ್ರೀತಿಸುತ್ತಿದ್ದೇನೆಂಬ ಸತ್ಯ ನಮ್ಮಿಬ್ಬರ ಬಾಂಧವ್ಯವನ್ನು ಹೊಸಕಿ ಹಾಕಬಹುದು ಅಥವಾ ಹಾಕದೆಯೂ ಇರಬಹುದು. ನಿನ್ನೆದುರಿಗೆ ಹೇಳಿ ನಿನ್ನನ್ನು ಎದುರಿಸುವ ಶಕ್ತಿ ನನಗಿಲ್ಲ ಹಾಲಾಗಲೀ ನೀರಾಗಲೀ ಈ ಪತ್ರ ಓದಿದ ನಿನ್ನ ಮುಖಭಾವ ನನಗೆ ಕಾಣುವುದಿಲ್ಲ ಎಂಬ ಧೈರ್ಯದಲ್ಲಿ ಪತ್ರ ಬರೆಯುತ್ತಿದ್ದೇನೆ.
 ಇಲ್ಲಿ ಯಾವುದೂ ಹಠದಿಂದ ಸಾಧಿಸುವಂತದ್ದಲ್ಲ, ನಿನ್ನ ನೋಡಿದಾಗಲೆಲ್ಲ ನಿನ್ನ ಜೊತೆ ಇದ್ದಾಗಲೆಲ್ಲ ನನಗನಿಸುವುದೊಂದೆ ನಿನ್ನಂಥ ಸಂಗಾತಿ ಜೊತೆಯಾದರೆ ಕೊನೆವರೆಗೂ ಕಣ್ಣಾಗುವೆ ಎಂದು. ಆದರೆ ನಾ ಯಾರನ್ನು ಹಚ್ಚಿಕೊಳ್ಳುವುದಿಲ್ಲ, ನನಗ್ಯಾರು ಬೇಡ ಎಂಬ ನಿನ್ನ ಮಾತುಗಳು ಸುಳಿದೊಡನೆ ಒಂದು ಕ್ಷಣ ಜೀವ ಹಿಂಡುವ ನಿರ್ದಯಿ ಭಾವ ನಡಗಿಸುತ್ತದೆ.
 ಎಲ್ಲೂ ಸಿಗದ ಖುಷಿ ನಿನ್ನಲ್ಲಿ ಅಡಗಿರುತ್ತದೆ. ಅದಕ್ಕೆ ನನ್ನೆಲ್ಲಾ ನೋವು ನಲಿವುಗಳನ್ನು ನಿನ್ನೊಂದಿಗೆ ಹೇಳಿ ಆನಂದಿಸುತ್ತೇನೆ. ನನ್ನ ಕಲ್ಪನೆಯಲ್ಲಿ ನೀನು ಒಂದು ಕ್ಷಣವೂ ನನ್ನನ್ನು ಬಿಟ್ಟಿರದ ಗೆಳತಿಯಾಗಿರುತ್ತೀಯ ಆದರೆ ಅದು ಕೇವಲ ಕಲ್ಪನೆ ಅಷ್ಟೆ ನನ್ನ ಕಲ್ಪನೆಯಲ್ಲಿ ನಾನೇನ್ನು ಬೇಕಾದರೂ ಸೃಷ್ಠಿಸಬಲ್ಲೆ ಆದರೆ ನಿಜವಾದ ಭಾವಕ್ಕೆ ಅರ್ಥ ಸಿಗುವುದು ವಾಸ್ತವದಲ್ಲೇ ವಿನಃ ಕಲ್ಪನೆಯಲ್ಲಲ್ಲ.
                      ಕಲ್ಪನೆಯಿಂದಾಚೆಗೆ ನಿನ್ನಲ್ಲೊಂದು ಮನವಿ, ನನ್ನನ್ನೇ ಪ್ರೀತಿಸುವೆಯಾ ಗೆಳಯ ಭಾವನೆಗಳ ತೀವ್ರತೆ ಅಲ್ಲ, ಮನಸಿನ ಕನ್ನಡಿಯಿದು ನನ್ನ ಪತ್ರ. ವೇಗದ ಉತ್ತರ ಬೇಕಿಲ್ಲ ನಿನ್ನ ಮನಸಿನ ಕನ್ನಡಿಯ ಬಿಚ್ಚಿಡು, ಕಾಯುತ್ತಿರುವೆ........

ಆಂ ಸ್ಟೋರಿ

                     ಕ್ಯಾಂಪಸ್ನಲ್ಲಿ ಹುಟ್ಟಿದ ಆಂ ಸ್ಟೋರಿ.

                                  ಕಾಲೇಜಿನ ಕಳೆದು ಹೋದ ಆ ದಿನಗಳ ನೆನಪುಗಳಲ್ಲಿ ತರ್ಲೆ ದಿನಗಳ ಮೆಲುಕು ಹ್ಹ ಹ್ಹ ಹ್ಹ.... ಕಾಲೇಜು ವಿದ್ಯಾಥರ್ಿಗಳೆಂದರೆ ಅವರು ಕವಿಗಳು ಪ್ರೀತಿ ಮಾಡುವಾಗ, ಅವರು ನಿದ್ರಾಸುತರು ಪಾಠ ಕೇಳುವಾಗ, ಅವರು ಧೈರ್ಯವಂತರು ಬಂಕ್ ಮಾಡುವಾಗ, ನಿಪುಣರು ಕಾಪಿ ಹೊಡೆಯುವಾಗ, ಅವರು ಪ್ರಜ್ಞಾವಂತರು, ಬುದ್ಧಿವಂತರು, ವಿನಯವಂತರು, ಗುಣವಂತರು ಸಕಲಕಲಾವಲ್ಲಭರು. ಅಯ್ಯೋ ಮರೆತಿದ್ದೆ ಕಥೆಗಾರರು ಕೂಡ, ಯಾಕೆ ಹೇಳ್ತಿದೀನಿ ಅಂದ್ರೆ ನಾವು ಕಥೆ ಬರಿತೀವಿ ಅಲ್ಲ ಅಲ್ಲ ಕ್ರಿಯೇಟ್ ಮಾಡ್ತೀವಿ. ನಮಗೆ ಸ್ಟೋರಿ ಹುಟ್ಟೋದೆ ಲೆಕ್ಚರ್ಸ್ನ ನೋಡಿದಾಗ. ಅವರ ಮೇಲಿನ ಹಿತಕರ ಕಾಮಿಡಿಗಳು, ಮಿಮಿಕ್ರಿಗಳು ಕ್ಯಾಂಪಸ್ನಲ್ಲಿ ಸಾಮಾನ್ಯ. ಅವರೇ ನಮಗೆ ಸ್ಪೂತರ್ಿ. ಕಥೆ ಹುಟ್ಟೋ ಸಮಯ ಶುರುವಾಗೋದು ಇಲ್ಲಿಂದ, ಪಾಠ-ಪಠ್ಯಗಳಿಂದಾಚೆಗೆ ಅವರ ನಡೆ ನುಡಿಗಳ ಮೇಲಿನ ಗಂಭೀರ ಗಮನ ಹರಿಸಿದಲ್ಲಿ.
 ಗಣಿತದ ಸರ್ ಒಬ್ರು ತುಂಬಾ ಸ್ಟ್ರಿಕ್ಟ್, ಅವರ ಕ್ಲಾಸ್ನಲ್ಲಿ ನಾವೆಲ್ಲ ಗಪ್ಚುಪ್. ಲೆಕ್ಕದ ಪ್ರತಿ ಸ್ಟೆಪ್ ಮುಗಿದ ಕೂಡಲೆ ಆಂ ಎಂದು ಸಂಭೋಧಿಸುತ್ತಿದ್ದರು. ಮಾತಿನ ಮೊದಲು ಅಥವಾ ಮಾತಿನ ಕೊನೆಯಲ್ಲಿ ಆಂ ಸೇರಿಸುವುದು ಅವರ ಅಭ್ಯಾಸ. ಅದು ನಮಗೆಲ್ಲ ನಗು ತರ್ತಿತ್ತು ಆದ್ರೂ ಕಂಟ್ರೋಲ್ ಮಾಡ್ಕೊಂಡು ಕೂರ್ತಿದ್ವಿ. ನಿಮಗೆ ಗೊತ್ತಿರಲಿ ಬೋರ್ ಹೊಡೆಯೊ ಕ್ಲಾಸ್ಗಳಲ್ಲಿ ಸಣ್ಣ ಸಣ್ಣ ಅಂಶಗಳು ನಗು ತರ್ಸುತ್ತೆ, ಮೇಲಾಗಿ ನಗೋದಿಕ್ಕೆ ಮನಸ್ಸು ಕಾಯ್ತ ಇರುತ್ತೆ ಯಾಕೆಂದ್ರೆ ನಗು ಬಂದ್ರೆ ನಿದ್ದೆ ಹೋಗುತ್ತೆ ಅಂತ ಅಷ್ಟೆ. ಕಾಲೇಜು ಹುಡುಗರಿಗೆ ಹಾಸ್ಯ ಪ್ರಜ್ಞೆ ಜಾಸ್ತಿ ಕಣ್ರಿ ಸುಮ್ ಸಮ್ನೆ ನಗ್ತಾ ಇರ್ತೀವಿ ನಮ್ಮನ್ನ ಎದ್ದು ನಿಲ್ಲಿಸಿ ಯಾಕ್ ನಗ್ತಿದ್ರಿ ಹೇಳಿ ಅಂತ ಕೇಳಿದ್ರೆ ನಮ್ಗೆ ಹೇಳೋಕೆ ಬರಲ್ಲ, ಒಂದು ಪಕ್ಷ ಹೇಳಿದ್ರು ಲೆಕ್ಚರ್ಸ್ಗಳಿಗೆ ಅದರಿಂದ ನಗು ಬರಲ್ಲ, ಬದಲಾಗಿ ಗೆಟ್ ಔಟ್ ಆಫ್ ದಿ ಕ್ಲಾಸ್ ಅಂತಾರೆ.


ಆಂ ಸ್ಟೋರಿ ಹುಟ್ಟಿದ ಸಮಯ:
 ನಮ್ಮ ಕ್ಯಾಂಪಸ್ನಲ್ಲಿ ಸಾಕಷ್ಟು ಕಲ್ಲು ಬೆಂಚುಗಳಿವೆ ಬೋರ್ ಆದಾಗ ಅಲ್ಲಿ ಕೂತು ಹರಟೋದು ನಮ್ಮ ಕಾಯಕ.
ಅವತ್ತು ಕ್ಲಾಸ್ ಇರ್ಲಿಲ್ಲ ನಮ್ಮ ಗುಂಪು ಅಲ್ಲಿ ಸೇರಿತ್ತು. ಆಂ ಸರ್ ಬರದೆ ಎರಡು ದಿನಗಳಾಗಿದ್ವು. ಆಂ ಸರ್ಗೆ ಆಂ ಜ್ವರ ಬಂದಿದೆಯಂತೆ ಮೊದ್ಲು ಮಾತಿನ ಶುರುವಿನಲ್ಲಿ ಹಾಗೂ ಕೊನೆಯಲ್ಲಿ ಆಂ ಅಂತ್ತಿದ್ರು ಈಗ ಮಾತೆ ಇಲ್ಲ ಬರಿ ಆಂ ಅಂತೆ ಅಂತ ರಿಪೂ ಹೇಳ್ದ, ಅತ ಹಾಸ್ಯ ಪ್ರವೃತ್ತಿಯ ಗೆಳೆಯ ಪೂರಿ ತರ ದಪ್ಪಗೆ ಇದ್ದ ಹಾಗಾಗಿ ಪೂರಿನ ಉಲ್ಟಾ ಮಾಡಿ ರಿಪೂ ಅಂತ ಕರಿತಿದ್ವಿ. ಆತ ಗಣಿತದ ಟೆಸ್ಟನಲ್ಲಿ ಅತೀ ಕಡಿಮೆ ಅಂಕ ಗಳಿಸಿ ಆಂ ಸರ್ ಹತ್ರ ಬೈಸಿಕೊಂಡಿದ್ದ. ನಿಮಗೆ ಆಂ ಸ್ಟೋರಿ ಗೊತ್ತಾ ಕೇಳ್ದ ಅಯ್ಯೋ ಇಲ್ಲ ಮಾರಾಯ ನಮ್ಗೆ ಕ್ರೈಂ ಸ್ಟೋರಿ ಮಾತ್ರ ಗೊತ್ತು ಅಂದ್ವಿ. ರಿಪೂ ಕಥೆ ಕಟ್ಟಕ್ಕೆ ಶುರು ಮಾಡ್ದ.


ಆಂ ಸ್ಟೋರಿ:
ನಮ್ಮ ಆಂ ಸರ್ ಸಣ್ಣವರಿದ್ದಾಗ ಸಿಕ್ಕಾಪಟ್ಟೆ ಮಾವಿನಹಣ್ಣುಗಳನ್ನ ತಿಂತಿದ್ರು. ಅವರಿಗೆ ಮಾವು ಅಂದ್ರೆ ಪಂಚಪ್ರಾಣ. ಅಪ್ಪ ತಂದು ಬಚ್ಚಿಟ್ಟ ಮಾವುಗಳನ್ನೆಲ್ಲಾ ಮುಂಡಾಯಿಸಿದ ಬಳಿಕ ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಮಾವುಗಳನ್ನ ಕದ್ದು ತಿನ್ನುತ್ತಿದ್ದರು. ಊರಿನಲ್ಲಿ ಮಾವಿನ ಸರದಾರ ಎಂದೇ ಪ್ರಖ್ಯಾತಿಗೊಂಡಿದ್ದರು. ಊರಿನ ತೋಟಗಳಿಂದ ಮಾವುಗಳನ್ನು ಕದ್ದು ತಿಂದ ಪರಿಣಾಮ ಮಾವಿನ ಬೆಲೆ ಗಗನಕ್ಕೇರಿತ್ತು. ಇವರಿಗೂ ಅದರ ಬಿಸಿ ತಟ್ಟಿತ್ತು, ಜ್ವರದ ತಾಪಮಾನ ಏರಿ ಆಂ ಸರ್ ಹಾಸಿಗೆ ಹಿಡಿದಿದ್ದರು. ಡಾಕ್ಟರ್ ಬೇರೆ ಇನ್ನೊಂದೆ ಒಂದು ಮಾವು ತಿಂದರೂ ಜೀವಕ್ಕೆ ಆಪತ್ತು ಜೊತೆಗೆ ಎಲ್ಲ ಮಾವುಗಳನ್ನ ಈತನೊಬ್ಬನೆ ತಿಂದರೆ ಭವಿಷ್ಯದಲ್ಲಿ ಮಾವಿನ ಕೊರತೆ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆಯ ಹುಳ ಬಿಟ್ಟು ಹೋಗಿದ್ರು. ಇದರಿಂದ ಚಿಂತಾಕ್ರಾಂತರಾದ ಪೋಷಕರು ಒತ್ತಾಯವಾಗಿ ಮಗನಿಂದ ಭಾಷೆ ತಕೋತಾರೆ. ಆಂ ಸರ್ ಕೂಡ ಒಲ್ಲದ ಮನಸಿನಿಂದ ಜೀವ ಇದ್ರೆ ಬಾಳೆಹಣ್ಣು ತಿಂದು ಬಾಳುವೆ ಎಂದು ನಿರ್ಧರಿಸಿ ನೊಂದ ಮನಸಿನಿಂದ ಇನ್ಯಾವತ್ತು ಕೂಡ ಆಂ (ಹಿಂದಿಯ ಆಂ) ತಿನ್ನಲ್ಲ ಅಂತ ಭಾಷೆ ಕೊಡ್ತಾರೆ. ಆಗಿಂದ ಈವರೆಗೂ ಆಂ ನ ನೆನಪಿನಿಂದ ಹೊರಬರಕ್ಕೆ ಆಗದೆ ಪ್ರತಿ ದಿನ ಲೆಕ್ಕಕ್ಕೆ ಸಿಗದಷ್ಟು ಸಲ ಆಂ ಜಪ ಮಾಡ್ತಿರ್ತಾರೆ. ಇದೆ ಆಂ ಸ್ಟೋರಿ ಅಂದ.
ಆಂ ಹಿಂದೆ ಇಂಥದೊಂದು ಸ್ಟೋರಿ ಇರುತ್ತೆ ಅಂತ ನಮ್ಗೆ ಗೊತ್ತಿರಲಿಲ್ಲ. ಕ್ಷಮಿಸಿ ನಾವು ಮಾಡೋದೆಲ್ಲ ತಮಾಷೆಗಾಗಿ ಇದು ತರ್ಲೆ ಹಿಂದಿನ ಸ್ಲೋಗನ್.


 --ದಿವ್ಯ ಚಂದ್ರಕಾಂತ್, ಶಿವಮೊಗ್ಗ.