Friday, October 14, 2011

ಮೌನಯಾನದಿ ನಾವು

                         

  ಕನ್ನಡ ಪ್ರಭದಲ್ಲಿ ಬಹುಮಾನ ಪಡೆದ ಲೇಖನ . (ದಿನಾಂಕ : ಮೇ ೮ )
                             ಚಂದ್ರ ಕಾಣುತ್ತಿದ್ದ ಆ ಹೊತ್ತು ಮನಸ್ಸು ನಿನ್ನೊಡನೆ ಇರಲು ಬಯಸಿತ್ತು. ದುಂಡು ಮುಖ ಹೊತ್ತು ಹಾಲಿನಂತೆ ಕಂಗೊಳಿಸುತ್ತಿದ್ದ ಅವನು ನಾವು ಹೆಜ್ಜೆ ಮುಂದಿಟ್ಟಾಗಲೆಲ್ಲ ನಮ್ಮೊಂದಿಗೆ ಬರುತ್ತಿದ್ದ. ಕಾಲ ಕ್ರಮಿಸುತಿತ್ತು ಅದು ಮೀರುವ ಮೊದಲೇ ಮಾತನಾಡಿಬಿಡುವ ತವಕ ಆದರೆ...ಮಾತೇ ಹುಟ್ಟುತ್ತಿಲ್ಲ, ಮೌನ ಮುರಿಯಲು ಇಬ್ಬರಿಂದಲೂ ಆಗುತ್ತಿಲ್ಲ. ನೀ ನಡೆದಂತೆ ನಾನು ನಡೆಯುತ್ತಿದ್ದೆ ಜೊತೆಯಲ್ಲಿ.ಸಣ್ಣಗೆ ಬೀಸಿದ ಗಾಳಿ ದಾರಿ ತುಂಬಾ ಹರಡಿದ್ದ ಒಣ ಎಲೆಗಳನ್ನು ಅಲುಗಾಡಿಸುತ್ತಿತ್ತು, ನಾನು ನೆನಪುಗಳ ಲೋಕಕ್ಕೆ ಜಾರಿದ್ದೆ. ತಂಪಾಗಿ ಬೀಸುತ್ತಿದ್ದ ಗಾಳಿ ಒಮ್ಮೆಲೇ ಕೊಂಚ ಜೋರಾಗಿ ಸ್ಪಶರ್ಿಸಿದರೆ ಸಾಕು ನನ್ನ ನೆನಪಾಗಿರಬೇಕು ನಿನಗೆ ಎಂದು ಭಾವಿಸುತ್ತಿದ್ದ ಆ ದಿನಗಳ ಮೆಲುಕು ಸುಂಯ್ ಎಂದು ಹಾದು ಹೋಗಿತ್ತು.
                               ಕಾಲೇಜು ದಿನಗಳ ನೆನಪಾಗಿತ್ತು, ಗಲ್ಲದ ಮೇಲೆ ಕೈಯೊಡ್ಡಿ ಪಾಠ ಕೇಳುವಂತೆ ನಟಿಸಿ ನಿನ್ನನ್ನೆ ನೋಡುವುದರಲ್ಲಿ ಅದೇನೋ ಆಸಕ್ತಿ ನನಗೆ, ಎಷ್ಟು ನೋಡಿದರೂ ಸಾಲದು ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಪಕ್ಕದ ಗೆಳತಿಗೆ ಸಂದೇಹ ಬರಬಹುದೆಂಬುದನ್ನೂ ಮರೆತು ನಿನ್ನನ್ನೆ ನೋಡುತ್ತಿದ್ದೆ. ನನ್ನ ದಿಟ್ಟ ನೋಟಕ್ಕೆ ನೀನೊಮ್ಮೆ ತಿರುಗಿ ನೋಡಿದರೆ ಸಾಕು ಸಣ್ಣ ನಗೆಯೊಂದು ಕೆನ್ನೆಯಲ್ಲಿ ಗುಳಿ ತಂದು ಗಲ್ಲದ ಮೇಲಿನ ಕೈಯನ್ನು ಸಡಲಿಸಿಬಿಡುತ್ತಿತ್ತು. ನಿನ್ನ ಮೇಲೆ ಸಾಕಷ್ಟು ಮೋಹ ಬೆಳೆಸಿಕೊಂಡಿದ್ದೆ. ಗೆಳತಿಯರೆಲ್ಲ ನಿನ್ನ ವಿಚಾರ ಮಾತನಾಡುತ್ತಿದ್ದರೆ ಮತ್ಸರದಿಂದ ಹಲ್ಲು ಕಡಿಯುತ್ತಿದ್ದೆ. ಎಷ್ಟೋ ಬಾರಿ ನನಗನ್ನಿಸಿದ್ದನ್ನು ಹೇಳಲು ನಾಚಿಕೆಯಾಗಿ ಭಯವಾಗಿ ಹೇಳದೆ ಹೋಗುತ್ತಿದ್ದೆ. ಅವನ್ನೆಲ್ಲಾ ನಿವಾಳಿಸಿ ನಿನ್ನೆದುರಿಗೆ ಧೈರ್ಯವಾಗಿ ಪ್ರೀತಿಯ ಮಾತುಗಳನ್ನಾಡಿಬಿಡುವ ಎನ್ನುವಷ್ಟರಲ್ಲಿ ಹಿಂಜರಿಕೆಯೊಂದು ನನ್ನ ತಡೆದು ಬಿಡುತ್ತಿತ್ತು. ನೀ ಎದುರಿಗೆ ಬಂದಾಗ ಎಲ್ಲವೂ ಮರೆತು ಹೋಗಿ ನಗುವುದೊಂದನ್ನು ಬಿಟ್ಟು ಬೇರೇನು ಮಾಡುತ್ತಿರಲಿಲ್ಲ. ಬೆಳಗುತ್ತಿದ್ದ ದಾರಿ ದೀಪಗಳು ಒಮ್ಮೆಲೆ ಮಂದವಾಗಿ ಹೋಗಲು ನಾನು ನೆನಪುಗಳಿಂದಾಚೆಗೆ ಬಂದಿದ್ದೆ.
 ಹೆಜ್ಜೆ ಚಿಕ್ಕ ಚಿಕ್ಕ ಹುಲ್ಲು ರಾಶಿಗಳ ಮೇಲೆ ಸಾಗಿತ್ತು, ಮನಸಿನ ತುಂಬಾ ತಂಗಾಳಿ ತಂದ ನೀನು ಮಾತ್ರ ಇನ್ನೂ ಮೌನ ಮುರಿದಿಲ್ಲ, ನಿನ್ನ ಕಡುಮೌನದಲ್ಲಿ ನಾನು ಕಳೆದು ಹೋಗುತ್ತಿದ್ದೆ. ರಸ್ತೆ ಬದಿಯ ಮರಗಳು, ದೀಪದ ಕಂಬಗಳು, ಬಸ್ ಸ್ಟ್ಯಾಂಡ್, ಚಲಿಸುವ ವಾಹನಗಳು ಎಲ್ಲವೂ ಮಾಮೂಲಿನಂತೆ ಕಾಣುತ್ತಿತ್ತಾದರೂ ನಿನ್ನ ಸನಿಹ ಮನಸಿಗೆ ಮುದ ನೀಡುತ್ತಿತ್ತು. ಕಣ್ಣು ಎಲ್ಲ ಬದಿಯೂ ಪ್ರದಕ್ಷಿಣೆ ಹಾಕುತ್ತಿತ್ತು. ಒಮ್ಮೆ ಹಾಯಿಸಿದಷ್ಟು ದೂ.........ರಕ್ಕೆ ನೇರ ನೋಡಿ ಕೆಳಗೆ ಬಾಗುತ್ತಿದ್ದ ದೃಷ್ಠಿ ಮತ್ತೆ ಮೇಲೆ ನೋಡುತಿತ್ತು. ಎಣಿಸಲಾಗದಷ್ಟು ತಾರೆಗಳ ಚಿತ್ತಾರ ಬಿಡಿಸಿದ ಆಗಸವನ್ನೊಮ್ಮೆ ನೋಡಿ ಮನದಂಗಳದಲ್ಲಿ ನೀ ಚೆಲ್ಲಿದ್ದ ಎಣಿಕೆಗೆ ಸಿಗದ ನೆನಪುಗಳ ನೆನೆದು ಬೀಗುತಿದ್ದೆ. ಇನ್ನೂ ನೀನು ಮಾತಾಡುತ್ತಿಲ್ಲ.
                                  ನಿನ್ನ ಹೊರತಾದ ನೆನಪುಗಳಲ್ಲಿ ನಾನಿಲ್ಲ, ನಿನ್ನ ಹೊರತಾದ ಭಾವಗಳಲ್ಲಿ ನಾನಿಲ್ಲ, ನಿನ್ನ ಹೊರತು ಬೇರೇನು ಬೇಕಿಲ್ಲ ಹೀಗೆಲ್ಲ ಅನಿಸುವುದೇಕೊ ತಿಳಿಯುತ್ತಿಲ್ಲ. ಮನಸೊಳಗೆ ತುಂಬಿ ಹೋಗಿರುವ ಮಾತುಗಳನ್ನೆಲ್ಲಾ ಹೊರ ಹಾಕಲು ಧೈರ್ಯ ಸಾಲುತ್ತಿಲ್ಲ, ಬಹುಶಃ ನಿನಗೂ ಹೀಗೆ ಆಗುತ್ತಿರಬಹುದು. ಅದಕ್ಕೆ ಮಾತುಗಳನ್ನು ನುಂಗಿದ್ದೀಯ ದಾರಿ ಸವೆಯುವ ಮುಂಚೆ ನೀನು ಹೇಳಬೇಕಿರುವುದನ್ನು ಹೇಳುವುದು ಇನ್ನೂ ಸಂಶಯವಾಗಿದೆ. ಅದೇಕೆ ಇಂದು ಇಷ್ಟು ಮೌನವಾಗಿದ್ದೀಯ? ನಿನ್ನ ನೆನಪುಗಳಿಂದ ದೂರ ಉಳಿಯದ ನಾನು, ಮನಸಿನ ಪುಟದಲ್ಲಿ ನಿನ್ನ ಛಾಯೆ ಕಂಡಂತೆಲ್ಲಾ ಮಾತು ಮರೆತು ಮೌನಿಯಾಗುತ್ತೇನಲ್ಲ ಹಾಗೆ ನಿನ್ನ ಮೌನಕ್ಕೂ ಕಾರಣ ಇರಬಹುದಾ, ಆ ಕಾರಣ ನಾನಾಗಿರಬಹುದಾ? ಇಂಥ ಸುಂದರ ಬೆಳದಿಂಗಳಲ್ಲಿ ನನ್ನ ಕೈ ಹಿಡಿದು ನಡೆಯದೆ ಉದ್ದ ಮಲಗಿರುವ ಖಾಲಿ ರಸ್ತೆಯಲ್ಲಿ ಸುಮ್ಮನೆ ಹೋಗುತ್ತಿರುವೆಯಲ್ಲ ನಿನ್ನ ಮುಚ್ಚಿಟ್ಟ ಪ್ರೀತಿ, ಬಚ್ಚಿಟ್ಟ ಪ್ರೀತಿಯನ್ನೊಮ್ಮೆ ಅಭಿವ್ಯಕ್ತಗೊಳಿಸಬಾರದೆ? ಸುಮ್ಮನೆ ಹೀಗೆ ನಡೆಯುತ್ತಿದ್ದರೆ ಆಲೋಚನೆಗಳು ದಿಕ್ಕು ದಿಕ್ಕುಗಳಲ್ಲಿ ಹರಿದಾಡುತ್ತವೆ. ಮಾತನಾಡಬಾರದೇ ನೀನು.
                              ಇನ್ನು ನನ್ನಿಂದಾಗುವುದಿಲ್ಲ ನಾನೆ ಮಾತಾನಾಡಬೇಕೆಂದು ನಿರ್ಧರಿಸಿ ನಿನ್ನ ಕಡೆ ತಿರುಗಿ ನೋಡಿದೆ, ನಾ ಒಪ್ಪಿದರೆ ಜೀವನ ಪೂರಾ ಮೌನವನ್ನೇ ಉಡುಗೊರೆಯಾಗಿ ಕೊಟ್ಟು ಬಿಡುವಂತಿತ್ತು ನಿನ್ನ ನೋಟ ಮತ್ತೆ ಸುಮ್ಮನಾದೆ. ಪಾಕರ್ಿನ ಕಲ್ಲು ಬೆಂಚಿನ ಮೇಲೆ ಕೂತ ನೀನು ನನ್ನನ್ನು ಕೂರಲು ಸನ್ನೆ ಮಾಡಿದಾಗಲೆ ಮನಸ್ಸು ಹಗುರವಾಯಿತು.  ನಿನ್ನ ಮೌನ ಅರ್ಥವಾಗಲಿಲ್ಲ. ಆ ಕೈಯನ್ನೆಳೆದು ಕೇಳಿಯೇ ಬಿಟ್ಟೆ ನಿನ್ನ ಮಾತುಗಳಿಗಾಗೆ ಕಾಯುತ್ತಿದ್ದೇನೆ ಏಕೆ ಸುಮ್ಮಿನಿದ್ದು ಸತಾಯಿಸುತ್ತೀಯ ನಾ ಬಯಸಿದ ಮಾತುಗಳು ನಿನ್ನಲ್ಲಿವೆ ಆ ಕಂಗಳೇ ಹೇಳುತ್ತಿರುವಂತೆ ಪ್ರೀತಿಯ ಮಾತಗಳನ್ನೊಮ್ಮೆ ಹೊರಗೆಡವಬಾರದೆ ಎಂದೆ. ಆ ಕ್ಷಣ ನನ್ನನ್ನೆ ದಿಟ್ಟಿಸಿ ನೀನಿದ್ದ ನೆನ್ನೆಗಳಲ್ಲಿರುವ ನಾನು, ನೀನಿರದ ನಾಳೆಗಳಲ್ಲಿ ಬದುಕಲಾರೆ, ನಿನ್ನನ್ನು ಸಂಪೂರ್ಣ ಹತ್ತಿರವಾಗಿಸಿಕೊಂಡಿದೆ ಮನಸು ಎಲ್ಲವನ್ನೂ ಮುಖಕ್ಕೆ ಹಿಡಿದು ತೋರುವ ಕನ್ನಡಿಯಾಗಲಾರೆ ಮನಸ್ಸಿಗೊಂದಿಷ್ಟು ಮಿಡಿತವಿದ್ದರೆ ಮೀಟಿ ಎಂದು ಪೊಟ್ಟಣ ಬಿಚ್ಚಿ ಕೆಂಪು ಗುಲಾಬಿ ಹಿಡಿದು ನಿನ್ನ ಬಾಳಿಗೆ ಆಹ್ವಾನವಿತ್ತ ನೀನು, ಬಹಳ ಸಮಯದಿಂದ ಮನಸ್ಸಿನಲ್ಲಿ ನಾನಿತ್ತ ಬೇಡಿಕೆಗೆ ಉತ್ತರವಾಗಿ ಕಂಡಿದ್ದೆ. ಮೌನ ಮುರಿದು ನನ್ನ ಜನುಮ ದಿನಕ್ಕೆ ಉಡುಗೊರೆಯಾಗಿ ನಿಂತಿದ್ದ ನಿನ್ನನ್ನು ಬಿಗಿದಪ್ಪಿ ಅತ್ತಿದ್ದ ಆ ಸಂತಸಕ್ಕೆ ಪಾರವುಂಟೆ?
 


1 comment: